ಹೀಗೊಂದು ಪುಟ್ಟ ಮೈ, ಮೈಯೊಳಗೆ ಮನಸು
ಮನಸಿಗೊಂದು ಹೃದಯ.
ಮನಸ ಮಯ್ಯಿಗೂ, ಮಯ್ಯ ಮನಸಿಗೂ
ನಂಟೇನಾದರು ಇದೆಯಾ?
ಒಂದೇ ಅನಿಸಿದರು ಬೇರೆ ಬೇರೆ ಜಗದಲ್ಲಿ ಅಲೆವಹಾಗೆ
ಜೊತೆಯಲಿದ್ದರೂ ಎಲ್ಲೋ ಇರುತ್ತವೆ ದೂರವಿದ್ದಹಾಗೆ
ಮಯ್ಯಿ ಮಾಯೆಯೋ, ಮನಸು ಮಾಯೆಯೋ
ಮಾಯವಾಗಿ ಹೃದಯ!
ಮಾಯೆಗೊಂದು ಮೈ, ಮಾಯೆಗೂ ಮನಸು
ಇದು ಮಾಯಾ ಹೃದಯ...
ಮನಸ ಮಯ್ಯಿಗೆ ರೆಕ್ಕೆ ಪುಕ್ಕ ಹಾರೋಕೆ ತೆರೆದ ಬಾನು!
ಮಯ್ಯ ಮನಸು ನೀರಾಗಿ ಕರಗಿದರು ಹರಿಯಲಾರದೇನು?
ನೂರು ಮಯ್ಯಿ ನೂರಾರು ಮನಸುಗಳ ಹಂಗು ಬಿಟ್ಟು ಹಾರಿ
ಎಲ್ಲೋ ನೆನಪಿನಲಿ, ಉಸಿರ ಲಯದಲ್ಲಿ, ಹಗಲ ಇರುಳಲ್ಲಿ,
ಅಳಿದು, ಉಳಿದು, ಇನ್ನೆಲೋ ಸುಳಿಯುವುದು...
ಸ್ತಬ್ಧ ಮಯ್ಯಿ ನಿಃಶಬ್ದ ಮನಸ್ಸು ಲಯಬದ್ದ ಮಿಡಿಯೊ ಹೃದಯ.