ಚುಚ್ಚು ಮಾತು
ಮೊನಚು ಮೌನ
ಇರಿದು,
ಕೆಂಪಗೆ ನೋವು ಸುರಿದು
ಹನಿ ಹನಿ ಜಿನುಗುತ್ತದೆ
ಪದ ಪದವಾಗಿ
ಹಾಳೆಮೇಲೆ
ಮಣಿ ಮಣಿ ಮಾಲೆ
ನನಗೆ ಕೆಂಪಿನ ಖಯಾಲಿ
ಕೈ ಇಟ್ಟರೆ ಸಾಕು,
ಹರಿವ ನೆತ್ತರೂ ನಿಂತು
ಹರಳಾಗಿ ಹೊಳೆಯುತ್ತದೆ.
ಹಾರವಾಗುತ್ತದೆ.
ಗದ್ಗದ ಕಂಠದ ಸುತ್ತ ಪೋಣಿಸಿದ
ಎರಡೆಳೆ ದುಃಖಕ್ಕೆ ಜೋತುಬಿಟ್ಟ ಹೃದಯ
ಡವಗುಟ್ಟುತ್ತದೆ ಭಾರವಾಗಿ.
ಅವನು ಕೊಟ್ಟದ್ದೋ.. ನಾನು ಪಡೆದದ್ದೋ..
ಒಟ್ಟಲ್ಲಿ ಒಡೆದು ಹೋಗಿರುವುದಂತೂ ನಿಜ.
ಹನಿ ಹನಿದು ಹರಳುಗಟ್ಟಿದೆ ಕೆಂಪಗೆ.
ಆಯ್ದಿಟ್ಟುಕೊಂಡಿದ್ದೇನೆ
ಒಂದೊಂದೇ..
ಒ ಂದೊಂದೇ..
ಹೀಗೆ ಎಷ್ಟೋ!!