Mamta Sagar

1966 / Bangalore

ಮತ್ತೆ ಮಳೆ - Poem by Mamta

ನಾನು, ಅವನು,
ಮಳೆಯಲ್ಲಿ ನಿಂತಿದ್ದೇವೆ
ಮೈಗೆ ಮೈ ಬೆಸೆದ ಅಂತರದಲ್ಲಿ
ನೆನೆಯುತ್ತಾ
ಅವನ ದೇಶದ ಕಾಡುಗಳನ್ನ.

ಆಳೆತ್ತರ ಮರಗಳು ಅಲ್ಲಿ
ಟೊಂಗೆ ಟೊಂಗೆಗಳಲ್ಲಿ
ಗೂಡು ಕಟ್ಟಿದೆ ಪ್ರೀತಿ.
ಮೆಲ್ಲಗೆ ನುಡಿಯುತ್ತಾನೆ,
'ಅಲ್ಲೂ ಹೀಗೇ ಮಳೆ'.

ಅವನ ಕರಿ ಗುಂಗುರ ಸುರುಳಿ
ನನ್ನ ಹಣೆ ಮೇಲಾಡಿ,
ಪಿಸುಗುಡುತ್ತೇನೆ,
'ಮಳೆ ಇಲ್ಲೂ ಹಾಗೇ'
ಮಿಂಚು ಕಣ್ಣುಗಳಲ್ಲಿ
ಜಿನುಗುತ್ತದೆ ಮೋಹ
ಸುರಿಯುತ್ತದೆ ಮಳೆ.

ನನ್ನ ಬಿಸಿಯುಸಿರು
ಅವನ ಮೈ ಮೇಲಾಡಿ
ಅವನ ನಗು ನನ್ನ ತುಟಿ ಮೇಲೆ,
ಕಾಯುತ್ತದೆ ಮಳೆ ಹೊರಗೆ,
ನಾವು ಒಳಗೆ;
ನೆನೆಯುತ್ತೇವೆ...
ಮಳೆಯಾಗಿ ಅವನು ನನ್ನೊಳಗೆ
ನಾನು ಮಳೆ ಅವನೊಳಗೆ
ಮಳೆ ಒಳಗೆ ಹೊರಗೆ!
ಈಗ ಇಲ್ಲಿ,
ಮಳೆಯಾಗಿ ಸುರಿಯುತ್ತದೆ
ಅವನ ನೆನಪು
ಮರೆತ ಕನಸು ಮರುಕಳಿಸಿದ ಹಾಗೆ
ಘಮ್ಮೆಂದು ಪ್ರೀತಿ.

ಅಲ್ಲಿ ಅವನೆದೆಯಲ್ಲಿ
ಹನಿಯುತ್ತದೆ ನನ್ನ ನೆನಪು!

ಸುರಿಯುತ್ತದೆ ಮಳೆ
ಅಲ್ಲಿ ಇಲ್ಲಿ.
69 Total read