Mamta Sagar

1966 / Bangalore

ಕನಸುಗಳು - Poem by Mam

ಆ ಕನಸು ಈ ಕನಸು... ಕನಸುಗಳು ಬೆರೆತು, ಬೆಸೆದು,
ಒಂದರಲ್ಲೊಂದು... ಎರಡೂ ಒಂದೇ ಅನ್ನೋಹಾಗೆ...
ಒಂದರಲ್ಲೊಂದು ಎರಡಿದೆ ಅನ್ನೋಹಾಗೆ.. ಕನಸುಗಳು.
ಹಾಗೆ ಹಾಗೇ ಕೈ ಕೈ ಹಿಡಿದು, ತುಟಿಗೆ ತುಟಿ.. ಮೈಗೆ ಮೈ..
ಮನಸ್ಸಿಗೆ ಮನಸ್ಸು ಕೊಟ್ಟು..

‘ಮುದ್ದು ಮಾಡು... ನನ್ನೇ ನೋಡು' ಅನ್ನೋ ಅವಳ ಕನಸಿಗೆ
ಮುಗುಳು ನಗು ಅವನ ಕನಸು. ಕಣ್ಣತುಂಬ ಕನಸಂತೆ
ಅವಳನ್ನೇ ತುಂಬಿಕೊಳ್ಳಬೇಕು ಅನ್ನೋ ಅವನ ಸುತ್ತ
ಅವನಾಸೆಯಾಗಿ ಸುತ್ತೋ ಆಸೆ ಅವಳಿಗೆ. ಅವನ ಕನಸು
ಅವಳಾಗಿ, ಅವಳ ಕನಸು ಅವನಾಗಿ ‘ಅವನು'
‘ಅವಳು'ಗಳನ್ನೂ ಮೀರಿ ಅವರಿಬ್ಬರೂ ಕನಸಾಗಿ ಕನಸ
ಕಾಣತ್ತಾ.... ಕಾಣುತ್ತಾ....

ಕನಸುಗಳಿಗೆ ನನಸಾಗೊ ವ್ಯಾಮೋಹ.. ಸದಾ ಅವಳನ್ನೇ
ನೋಡುತ್ತ ಮುದ್ದಿಸುತ್ತ ಕಣ್ಣ ತುಂಬ ತುಂಬಿಕೊಳ್ಳೊ ಅವನ
ಕನಸಿಗೆ ಅವಳಾಳಕ್ಕೂ ಈಜೊ ಆಸೆ. ಅವಳಿಗೋ ಅವನ
ಸುತ್ತ ಗಿರಗಿರನೆ ತಿರುಗುತ್ತ ರೆಕ್ಕೆ ಬಿಚ್ಚಿ ಬಾಚಿಕೊಳ್ಳುತ್ತ ಅವನ
ಮೇಲೆರಗಿ ಕೊಕ್ಕಿ ಕುಣಿಯುವಾಸೆ.

ಅವಳ ಮೈ ಮೃದು. ನವಿರು ರೇಶಿಮೆ ರೆಕ್ಕೆ ಪುಕ್ಕ ಬೀಸಿ
ಹಾರುವುದಕ್ಕೇ ಆಕಾಶದಗಲಕ್ಕೂ ಹರಡಿದ ಆಸೆಗಳ
ವಿಸ್ತಾರ.

ಈಜುವ ಕನಸು, ಹಾರುವ ಕನಸು ಹೊತ್ತು ಹೊರಡುತ್ತಾರೆ.
ಮೀನಾದರೆ ಅವನು ಹಕ್ಕಿಯಾಗುತ್ತಾಳೆ ಅವಳು. ಅವನು
ಆಳಕ್ಕೆ, ಅವಳು ಎತ್ತರಕ್ಕೆ ಒಬ್ಬರನ್ನೊಬ್ಬರು ಹುಡುಕಿಕೊಂಡು
ಹೊರಡುತ್ತಾರೆ.
ಕಣ್ಣೂ ಮಿಟುಕಿಸದೆ ಅಲೆ ಅಲೆ ಮೇಲೆ ಫಳಫಳ ಹೊಳೆದು
ನೀರಲ್ಲಿ ನೀರಾಗಿ ಬೆರೆತು ಸರ ಸರನೆ ಸುಳಿದು ನೀರ
ನಡಿಗೆಯಲ್ಲಿ ಅವಳ ಹೆಜ್ಜೆ ಗುರುತ ಹುಡುಕುತ್ತ ಕನಸ
ಸಾಮ್ರಾಜ್ಯದಾಳಕ್ಕೆ ಧುಮುಕುತ್ತಾನೆ ಅವನು.

ಅಷ್ಟಗಲ ಆಕಾಶದ ಆಚಿಂದೀಚೆ ಹುಡುಕಿದರೂ ಅವನಿರವಿಲ್ಲ.
ಮೈಮೇಲಾಡಿದ ಮೃದು ಸ್ಪರ್ಷ, ಉದ್ದುದ್ದ ಬೆರಳು ನುಡಿಸಿದ
ಮೋಹ... ಬಿಕೋ ಅನುವ ಆಕಾಶದಲ್ಲಿ ಕನಸುಗಳಿಗೆ ಜಾಗವಿಲ್ಲ.
ಕೆಳಗೆ ನೀರೊಳಗೆ ಸುಳಿವ ಅವನು ಆಕಾಶದ ಅವಳ ಕಂಡು
ಆಗಾಗ್ಗೆ ಜಿಗಿಯುತ್ತಾನೆ. ಅವಳು ಬಗ್ಗಿ ಬಂದು ಅಲೆಮೇಲೆ
ಗಿರಕಿ ಹೊಡೆಯುತ್ತಾಳೆ. ಜೊತೆಗಿದ್ದ ಕನಸು. ಕೈಗೆಟುಕದ
ನನಸು. ನನಸಿನ ಘಳಿಗೆ, ಕನಸು ಒಡೆಯುತ್ತದೆ. ಈಗ
ಕನಸಿನ ನೆನಪಷ್ಟೆ.

ನನಸಾದ ಕನಸುಗಳಿಗೆ ಮತ್ತೆ ಕನಸಾಗೋ ಆಸೆ.
ನನಸುಗಳು ಮತ್ತೆ ಕನಸಬೇಕಿದ್ದರೆ ಸಮುದ್ರ ಸೀಳಿ, ಭೂಮಿ
ಆಕಾಶಗಳು ಒಂದಾಗಬೇಕು.
ಆಗಬೇಕು!!
85 Total read