ಈ ಹೆಂಗಸರ ಮಧ ಇಂದು ಅತಿರೇಕಕ್ಕೆ ಹೋಗಿದೆ,
ಇವರ ಆರ್ತ ಕೂಗು ಭಕ್ತಿಯಂತೆ ಕೇಳಿಸುತ್ತಿದೆ.
ಮಲಗಿರುವ ಮಕ್ಕಳು ಕನಸಿಂದ ದಿಗ್ಗನೆ ಎದ್ದು ,ಬೆಳಕಲ್ಲಿ ಕಣ್ಣು ಕಾಣಿಸದೆ
ಕಕ್ಕಾವಿಕ್ಕಿಯಾಗಿ, ಹಾಗೇ ನೆಲದ ತಂಪಿಗೆ ಕೆನ್ನೆ ಒತ್ತಿ, ಭೂಮಿಯೊಳಗಣ ಸದ್ದ ಆಲಿಸುವ
ಆಟ ಆಡುತ್ತಿದ್ದಾರೆ. ಈ ಹೆಂಗಸರ ಸಂಕಟ ಆಧ್ಯಾತ್ಮವಾಗಿಹೋಗಿದೆ.
ಈ ಹಾಸ್ಯಾಸ್ಪದ ಭಗವಂತ ಏನೂ ಕಾಣಿಸದ ಕುರುಡ.ಸಂಗೀತವೂ ಗೊತ್ತಿಲ್ಲದ
ಚಪ್ಪಟೆಕಿವಿಯ ಸರ್ವಾ ಂತರ್ಯಾಮಿ.ಪೆದ್ದುಪೆದ್ದಾಗಿ ಆಕಾಶದ ಅಗಲಕ್ಕೆ ಕುಂಡೆಯಾನಿಸಿ ಕೂತ
ಭಗವಂತ.ಮುಳ್ಳು ಕಂಟಿಯ ತುದಿಗೆ ಬೆಳಕ ತುರಿಸುತ್ತ ಕುಳಿತ ಮಿಂಚುಹುಳ ಈ ಭಗವಂತ.
ಎಲ್ಲವನು ಅರಿತ ಅಲ್ಲಾಡುವ ಶಿಖೆಯ ಆನಂದ ಕಂದ ತುಂದಿಲ ಕಂದ.ಆಕಾಶದಲ್ಲೂ ತುಂಬಿ
ಆತ್ಮದೊಳಗೂ ಹರಿದು ಹೇಗೆ ಹರಸುವುದು ಎಂದು ಹಲುಬುತ್ತಿದ್ದಾನೆ.
ಈ ಹೆಂಗಸರು ಈಗ ಭಂಗಿ ಬದಲಿಸುತ್ತಿದ್ದಾರೆ. ಹುಚ್ಚು ಕೆದರಿದ್ದವರು, ಭಕ್ತಿ ತುಂಬಿದ್ದವರು
ಒಂದರೆಗಳಿಗೆ ತಡೆದು ನೀರು ಕುಡಿದು ,ಹಾಲೂಡಿಸಿ,ಕೈಕಾಲುಬೆರಳುಗಳ ನೆಟಿಗೆ ಮುರಿದು,
ಕೆದರಿದ್ದ ಮುಡಿಯ ಮತ್ತೆ ವೈಯಾರದಲಿ ಬಿಗಿದು,ಮತ್ತೆ ಕದಡಿ
ಇನ್ನೊಂದು ಆರ್ತ ಆಲಾಪಕ್ಕೆ ಸಿದ್ದರಾಗುತ್ತಿದ್ದಾರೆ.
ಎಲ್ಲವೂ ನಿಜ,ಹಸಿ.ಎಲ್ಲವೂ ದೂರ ಭಗವಂತನಂತೆ ಮತ್ತು ಅವನ ಸೈನಿಕ ಸಂತರಂತೆ
ಇರುವ ಭಕ್ತಿಯ ಮಾರ್ಗ-ಹುಚ್ಚು ಹಳವಂಡ-ಇದು ಮಾತ್ರ ಈ ಅಮವಾಸೆಯ ಕತ್ತಲಲ್ಲಿ ನಿಜ
ಉಳಿದದ್ದು ಸುಳ್ಳು,ವ್ಯಭಿಚಾರ ಮತ್ತು ಕೈಗೆ ಎಟುಕುವಂತದ್ದು.
ನಾನು ದಣಿದು ನೋಡುತ್ತಿದ್ದೇನೆ??
ಈ ಹೆಂಗಸರೂ ಇಲ್ಲದ,ಭಗವಂತನೂ ಅಲ್ಲದ
ಮಕ್ಕಳೂ ಕೈಗೆ ಸಿಗದ ಈ ಟೊಳ್ಳು ಬಿಸಿಲಿನಲ್ಲಿ
ಮಿದುಳೊಳಗೆ ಬೆಳದಿಂಗಳು ಮತ್ತು ಹುಚ್ಚು ನಗು
ಸುಮ್ಮನೇ ನೋಡುತ್ತಿದ್ದೇನೆ
ಚೀತ್ಕರಿಸುತ್ತಿರುವ ಹೆಂಗಸರ ಹಾಹಾಕಾರದ ನಡುವೆ ಹೊಮ್ಮುತ್ತಿರುವ
ಹಭೆಯ ನಡುವೆ ಎದ್ದು ನಿಂತಿರುವ ಭಗವಂತ.
ನಾನು ನೋಡುತ್ತಿದ್ದೇನೆ. ಆತ ಎಲ್ಲವ ಕಾಣುತ್ತಿದ್ದಾನೆ.